.
ಸಕಲೇಶಪುರ ವಳಲಹಳ್ಳಿ ಗ್ರಾಮಪಂಚಾಯಿತಿಯ ಬೊಬ್ಬನಹಳ್ಳಿ ಗ್ರಾಮಕ್ಕೆ ಹಾಸನ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ಹಾಗೂ ಸಂಸದರ ಅನುದಾನದಲ್ಲಿ ನೂತನ ಬಸ್ ತಂಗುದಾಣ ಕಾಮಗಾರಿಗೆ ಗ್ರಾಮಸ್ಥರಿಂದ ಗುದ್ದಲಿ ಪೂಜೆ ನೆರವೇರಿಸಲಾಯಿತು.
ಬೊಬ್ಬನಹಳ್ಳಿ ಗ್ರಾಮದಲ್ಲಿ ಸುಮಾರು ಐವತ್ತು ಮನೆಗಳಿದ್ದು ಪ್ರತಿನಿತ್ಯ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹಾಗೂ ಗ್ರಾಮಸ್ಥರು ಪಟ್ಟಣಗಳಿಗೆ, ಆಸ್ಪತ್ರೆಗಳಿಗೆ ಹೋಗಿ ಬರಲು ಬಸ್ ವ್ಯವಸ್ಥೆ ಇದ್ದರೂ ಕೂಡ ಸರಿಯಾದ ಬಸ್ ನಿಲ್ದಾಣದ ಇರಲಿಲ್ಲ. ಅಲ್ಲದೇ ಈ ಭಾಗದಲ್ಲಿ ಹೆಚ್ಚು ಕಾಡಾನೆಯ ಸಮಸ್ಯೆಯಿಂದಾಗಿ ಪ್ರಯಾಣಿಕರು ಜೀವಭಯದಿಂದಲೇ ಬಸ್ಸಿಗಾಗಿ ಕಾಯುತ್ತಾ ಮರದ ಕೆಳಗಡೆ ನಿಲ್ಲಬೇಕಾಗಿತ್ತು.ಆದುದರಿಂದ ಗ್ರಾಮಕ್ಕೊಂದು ಬಸ್ ನಿಲ್ದಾಣದ ವ್ಯವಸ್ಥೆ ಮಾಡಿಕೊಡುವಂತೆ ಜನಪ್ರತಿನಿಧಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದ್ದರು.
ದಿನಾಂಕ:24.06.2024 ರಂದು ನಡೆದ ಜಿಲ್ಲಾ ಖನಿಜ ಪ್ರತಿಷ್ಠಾನ ಸಮಿತಿ ಸಭೆಯ ನಡವಳಿಯಂತೆ ಹಾಗೂ ದಿನಾಂಕ: 15.10.2024 ರಂದು ಹಾಸನ ಲೋಕಸಭಾ ಕ್ಷೇತ್ರ ಲೋಕಸಭಾ ಸದಸ್ಯರ ಪ್ರಸ್ತಾವನೆ ಮೆರೆಗೆ ಹಾಸನ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ ಹಾಗೂ ಸಂಸದರ 1.75 ಲಕ್ಷ ಅನುದಾನದಲ್ಲಿ ಗ್ರಾಮಕ್ಕೊಂದು ಬಸ್ ನಿಲ್ದಾಣದ ವ್ಯವಸ್ಥೆ ಮಾಡಿಕೊಳ್ಳಲು ಅನುಮೋದನೆ ಮಾಡಲಾಗಿತ್ತು.
ಇಂದು ಇದರ ಗುದ್ದಲಿ ಪೂಜೆಯನ್ನು ಗ್ರಾಮಸ್ಥರು ಹಾಗೂ ಸ್ಥಳೀಯ ನಾಯಕರು ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಕೆ ಪಿ ಕೃಷ್ಣೇಗೌಡ ಮಾತನಾಡುತ್ತಾ ಈ ಗ್ರಾಮದ ಸುತ್ತಮುತ್ತ ಕಾಡಾನೆಗಳು ಹೆಚ್ಚಾಗಿದ್ದು ಮಳೆ ಕಾಲದಲ್ಲಿ ಬಸ್ಸಿಗಾಗಿ ಪ್ರಯಾಣಿಕರು ಮರದ ಕೆಳಗೆ ಆಶ್ರಯ ಪಡೆಯಬೇಕಾಗಿತ್ತು. ಕಾಂಗ್ರೆಸ್ ಮುಖಂಡರಾದ ಮುರುಳಿ ಮೋಹನ್ ಶಿಫಾರಸ್ಸು ಮೇಲೆ ಇದನ್ನು ಸಂಸದರಾದ ಶ್ರೇಯಸ್ ಪಟೇಲ್ ಅವರ ಗಮನಕ್ಕೆ ತರಲಾಗಿತ್ತು.ಇಂದು ನೂತನ ಬಸ್ ನಿಲ್ದಾಣಕ್ಕೆ ಗುದ್ದಲಿ ಪೂಜೆ ಮಾಡಲಾಗಿದೆ. ಕೆಲವೇ ದಿನಗಳಲ್ಲಿ ಇದರ ಉಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳುವಂತಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಬಿ.ಎಂ ವಿಜಯ್ ಕುಮಾರ್,ಅಶೋಕ್,ಲೋಕಣ್ಣ,ಸುನಿಲ್, ಪರಮೇಶ್,ಗೋಪಿ,ಹಾಸನ ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಸಂಚಾಲಕರಾದ ವಳಲಹಳ್ಳಿ ವೀರೇಶ್, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ರುದ್ರೇಶ್, ಮಹೇಶ್, ಕುರಭತ್ತೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಬಿ. ಟಿ ಕಿರಣ್ ಸೇರಿದಂತೆ ಗ್ರಾಮಸ್ಥರು ಇದ್ದರು.
