ಒಂದು ಸಿಸಿ ಕ್ಯಾಮೆರಾ ಹತ್ತು ಬಂದೂಕಿಗೆ ಸಮವಾಗಿ ಕೆಲಸ ಮಾಡುತ್ತದೆ .:- ಡಿವೈಎಸ್ಪಿ ಮಾಲತೀಶ ಎಸ್ .ಕೆ
ಸಕಲೇಶಪುರ :- ಇತ್ತೀಚಿನ ದಿನದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪ್ರತಿಯೊಬ್ಬ ಬೆಳೆಗಾರರು ತಾವು ಜಮೀನಿನಲ್ಲಿ ಹಾಗೂ ಸ್ವೀಕರಿಸಿದ ಉಗ್ರಾಣಗಳಿಗೆ ಬೆಳೆದ ಸಿಸಿ ಕ್ಯಾಮೆರಾಗಳನ್ನು ಹಾಕಿಸಿಕೊಳ್ಳುವ ಮೂಲಕ ಕಳ್ಳತನದ ಅಪರಾಧವನ್ನು ತಡೆಗಟ್ಟಬಹುದು.ಒಂದು ಸಿಸಿ ಕ್ಯಾಮೆರಾ ಹತ್ತು ಬಂದೂಕಿಗೆ ಸಮವಾಗಿ ಕೆಲಸ ಮಾಡುತ್ತದೆ. ಮುಂದಿನ ದಿನದಲ್ಲಿ ಎಲ್ಲಾ ಬೆಳೆಗಾರರು ಸಿಸಿ ಕ್ಯಾಮೆರಾ ಹಾಕಿಸಿಕೊಳ್ಳಿ ಎಂದು ಡಿವೈಎಸ್ಪಿ ಮಾಲತೀಶ ಎಸ್ .ಕೆ ಸಲಹೆ ನೀಡಿದರು.
ಶುಕ್ರವಾರ ವಳಲಹಳ್ಳಿ ಗ್ರಾಮಪಂಚಾಯಿತಿ ಬೆಳೆಗಾರರ ಸಂಘದ 13ನೇ ಮಾಸಿಕ ಸಭೆ ನಡೆಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಬೆಳೆಗಾರರಿಗೆ ಕಾಫಿ, ಮೆಣಸು ಹಾಗೂ ಏಲಕ್ಕಿ ಸೇರಿದಂತೆ ವಾಣಿಜ್ಯ ಬೆಳೆಗಳ ಕಳ್ಳತನ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಬೆಳೆಗಾರರು ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು ಕಾಫಿ, ಮೆಣಸು ಹಾಗೂ ಏಲಕ್ಕಿ ತೋಟಕ್ಕೆ ಕೆಲಸಕ್ಕೆಂದು ಬರುವ ಹೊರರಾಜ್ಯದವರ ವೈಯಕ್ತಿಕ ದಾಖಲಾತಿಗಳನ್ನು ಇಟ್ಟುಕೊಳ್ಳುವ ಮೂಲಕ ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಕೂಡಲೇ ಪೊಲೀಸ್ ಠಾಣೆಗೆ ದೂರು ನೀಡಿ. ಇದರಿಂದ ಕಳ್ಳತನ ಸೇರಿದಂತೆ ಬೆಳೆಗಾರರ ಮೇಲೆ ನಡೆಯುವ ದೌರ್ಜನ್ಯವನ್ನು ತಡೆಗಟ್ಟಬಹುದು ಎಂದು ಹೇಳಿದರು.
ಪ್ರತಿಯೊಬ್ಬ ಬೆಳೆಗಾರರು ತಮ್ಮ ತೋಟಗಳಲ್ಲಿ ಹಾಗೂ ಕಾಫಿ ಕಟಾವು ಮಾಡಿ ಒಣಗಿ ಹಾಕಿರುವ ಪ್ರದೇಶದಲ್ಲಿ ಸಿಸಿ ಕ್ಯಾಮರಗಳನ್ನು ಹಾಕಿಕೊಳ್ಳಬೇಕು. ಇದರಿಂದ ಅಪರಾಧಿಗಳನ್ನು ಬಹುಬೇಗನೆ ಪತ್ತೆಹಚ್ಚಬಹುದು.ಹಾಗೂ ಕಾಫಿ, ಮೆಣಸು, ಏಲಕ್ಕಿ ಕಳ್ಳತನವಾದರೆ ಅಥವಾ ಯಾವುದೇ ಅಪರಾಧಗಳಾದಲ್ಲಿ ಕೂಡಲೇ ಪೋಲಿ ಸಹಾಯವಾಣಿ 112 ಸಂಪರ್ಕಿಸಿ. ನಂತರ ಸಂಬಂಧ ಪಟ್ಟ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿ.
ವರ್ತಕರು ಅಪರಿಚಿತ ವ್ಯಕ್ತಿಗಳು ಕಾಫಿ ಮೆಣಸು ಏಲಕ್ಕಿಯನ್ನು ಮಾರಲು ಬಂದಾಗ ಅವರ ಆರ್ಟಿಸಿ ಹಾಗೂ ಆಧಾರ್ ಕಾರ್ಡನ್ನು ತೆಗೆದುಕೊಳ್ಳಬೇಕು. ಹಾಗೂ ಮಾರಾಟ ಮಾಡಲು ಬರುವ ವ್ಯಕ್ತಿಗಳ ಸಂಪರ್ಕ ಸಂಖ್ಯೆ ಸೇರಿದಂತೆ ಅವರ ವಿಳಾಸವನ್ನು ತಮ್ಮ ಡೈರಿಯಲ್ಲಿ ಬರೆದಿಟ್ಟುಕೊಳ್ಳಬೇಕು. ಇವರೊಂದಿಗೆ ಹಣದ ವ್ಯವಹಾರವನ್ನು ಬ್ಯಾಂಕಿನ ಮೂಲಕ ಮಾಡಬೇಕು. ಇದರಿಂದ ಇಂಥವರೇನಾದರೂ ಪೊಲೀಸರು ಬಹುಬೇಗನೆ ಪತ್ತೆ ಹಚ್ಚಬಹುದಾಗಿದೆ ಎಂದರು.
ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಇತ್ತೀಚಿನ ದಿನದಲ್ಲಿ ಗಾಂಜಾ ವೆಸನಿಗಳಾಗುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ತಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಎಲ್ಲಿಯಾದರೂ ಗಾಂಜಾ ಮಾರಾಟ ಅಥವಾ ಗಾಂಜಾ ಬೆಳೆದಿದ್ದರೆ ಕೂಡಲೇ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿ, ಮಾಹಿತಿಯನ್ನು ಕೊಟ್ಟವರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ಹೇಳಿದರು.
ಎಲ್ಲಿಯಾದರೂ ಕಾಡಾನೆಗಳು ಕಂಡು ಬಂದಲ್ಲಿ ಕೂಡಲೇ ಸಾಮಾಜಿಕ ಜಾಲತಾಣದಲ್ಲಿ ವಿಚಾರಗಳನ್ನು ಹಂಚಿಕೊಳ್ಳಿ, ಇದರಿಂದ ಆ ಪದೇಶದಲ್ಲಿ ಸಂಚರಿಸುವ ವಾಹನ ಚಾಲಕರು ಹಾಗೂ ಸಾರ್ವಜನಿಕರು ಎಚ್ಚೆತ್ತುಕೊಳ್ಳುವ ಮೂಲಕ ಕಾಡಾನೆಗಳಿಂದ ಮುಂದೆ ಉಂಟಾಗುವ ಅನಾಹುತವನ್ನು ತಪ್ಪಿಸಬಹುದು. ಒಟ್ಟಾರೆ ಬೆಳೆಗಾರರು ಪೊಲೀಸ್ ಇಲಾಖೆಯೊಂದಿಗೆ ನಿಕಟ ಸಂಪರ್ಕ ಇಟ್ಟುಕೊಳ್ಳುವ ಮೂಲಕ ಕಳ್ಳತನ ಪ್ರಕರಣಗಳು ಸೇರಿದಂತೆ ಬೆಳೆಗಾರರ ಮೇಲೆ ನಡೆಯುವ ದುಷ್ಪೃತ್ಯಗಳನ್ನು ತಡೆಗಟ್ಟಬಹುದು ಎಂದು ಹೇಳಿದರು.
ವೇದಿಕೆಯಲ್ಲಿ ಹಾಸನ ಜಿಲ್ಲಾ ಬೆಳೆಗಾರರ ಸಂಘದ ಮಾಜಿ ಸಂಘಟನಾ ಕಾರ್ಯದರ್ಶಿ ಕೆ.ಪಿ ಕೃಷ್ಣೇಗೌಡ ,ವಳಲಹಳ್ಳಿ ಬೆಳೆಗಾರರ ಸಂಘದ ಅಧ್ಯಕ್ಷರಾದ ದರ್ಶನ್ ಮರ್ಜನಹಳ್ಳಿ,ಗೌರವ ಅಧ್ಯಕ್ಷರಾದ ರಮೇಶ್,ಉಪಾಧ್ಯಕ್ಷರಾದ ರುದ್ರೇಶ್, ಖಜಾಂಚಿಗಳಾದ ಹೂವಣ್ಣ ಗೌಡ, ಕಾರ್ಯದರ್ಶಿ ಅರುಣ್ ಗೌಡ ಸೇರಿದಂತೆ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಬೆಳೆಗಾರರು ಇದ್ದರು.

