ಕನ್ನಡ ಪುರಾತನ ಭಾಷೆ, ಅದರ ಒಳಗನ್ನು ತಿಳಿದುಕೊಂಡರೆ ಅತ್ಯುತ್ತಮವಾಗಿ ಬಳಸಿ, ಬೆಳಗಿಸುವ ಕೆಲಸ ಆಗುತ್ತದೆ, ಇಂತಹ ವೇದಿಕೆಗಳಲ್ಲಿ ಮಾತ್ರಾ ಕನ್ನಡವನ್ನು ಹಾಡಿಹೊಗಳಿ ಆಮೇಲೆ ಅದನ್ನು ಮರೆಯುವ ಕೆಲಸ ಆಗಬಾರದು, ಮಾತೃಭಾಷೆ ಕನ್ನಡಕ್ಕೆ ಎಲ್ಲರೂ ಮನಕೊಟ್ಟು ಮಕ್ಕಳಿಗೂ ಅರ್ಥಮಾಡಿಸುವ ಅಶ್ಯಕತೆಯಿದೆಯೆಂದು ಶಾಸಕ ಸಿಮೆಂಟ್ ಮಂಜುನಾಥ್ ಕರೆನೀಡಿದರು.
ಆಲೂರು ತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿ ಹರಿಹಳ್ಳಿಯ ಮಂಗಳ ಕಲಾ ಸಾಹಿತ್ಯವೇದಿಕೆ ಯಿಂದ ಏರ್ಪಡಿಸಿದ್ದ ಕನ್ನಡರಾಜ್ಯೋತ್ಸವ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ನಿ. ಐ ಎಫ್ ಎಸ್ ಅಧಿಕಾರಿಗಳೂ ಸಾಹಿತಿಯೂ ಆದ ಶ್ರೀ ಕೆ ವಿ ಲಕ್ಷ್ಮಣಮೂರ್ತಿಯವರು ಕನ್ನಡನಾಡಿನ ಹಿರಿಮೆಯನ್ನು ಹೇಳುತ್ತಾ ಭಾಷೆಯಾಗಿ ನಮ್ಮ ಕನ್ನಡವನ್ನು ಪ್ರಧಾನ ಸ್ಥಾನದಲ್ಲಿಟ್ಟು ಕಲಿಸಬೇಕು, ಕನ್ನಡ ಶಾಲೆಗಳು ಮುಚ್ಚುವುದನ್ನು ತಪ್ಪಿಸಲಿಕ್ಕಾಗಿ ಎಲ್ಲರೂ ಶ್ರಮವಹಿಸಬೇಕು. ನಮ್ಮ ರಾಜ್ಯದ ಹೆಮ್ಮೆ ಚನ್ನಪಟ್ಟಣದ ಗೊಂಬೆಯ ಕಲೆಯನ್ನೂ ಪ್ರೋತ್ಸಾಹಿಸುವ ಕೆಲಸ ನಡೆಯಬೇಕಿದೆ ಎಂದರು.
ಹಾಸನ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಾ ನಂ ಲೋಕೇಶ್ ಅವರು ಹಳ್ಳಿಗಳಲ್ಲಿ ಕನ್ನಡರಾಜ್ಯೋತ್ಸವದಂತಹ ಕಾರ್ಯಕ್ರಮ ಆಯೋಜನೆ ಸವಾಲಿನ ಕೆಲಸವಾಗಿದೆ, ಆದರೆ ಕಳೆದ ಇಪ್ಪತ್ತೇಳು ವರ್ಷಗಳಿಂದ ಸತತವಾಗಿ ನಡೆಸಿಕೊಂಡು ಬರುತ್ತಿರುವ ಮಂಗಳ ಕಲಾ ಸಾಹಿತ್ಯ ವೇದಿಕೆಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ, ಕನ್ನಡ ಉಳಿಸಲು, ಬಳೆಸಲು ಇರುವ ಭಾಷೆಯಲ್ಲ, ನಮ್ಮ ಜೀವನದ ಸರ್ವ ರಂಗಗಳಲ್ಲೂ ಅಳವಡಿಸಿಕೊಂಡು ಭಾಷೆಯ ಪ್ರೌಢಿಮೆಯನ್ನು ತೋರಿಸುವ ಕೆಲಸ ಆಗಬೇಕೆಂದು ಮಾರ್ಮಿಕವಾಗಿ ನುಡಿದರು.
ಕಣದಹಳ್ಳಿ ಮಂಜೇಗೌಡ, ಹೇಮಾಲೋಕೇಶ್, ಸಮಾಜ ಸೇವಕ ಮುರಳಿ ಮೋಹನ್, ಎನ್ ಜೆ ಮಂಜುನಾಥ್, ಕಟ್ಟೆಗದ್ದೆ ನಾಗರಾಜ್, ಹೆಚ್ ಡಿ ಗೋಪಾಲ್, ಹೈದೂರು ಜಯಣ್ಣ ಮುಂತಾದವರು ಮಾತನಾಡಿದರು.
ನಿವೃತ್ತ ಸೈನಿಕ ಹೆಚ್ ಕೆ ವೆಂಕಟೇಶ್, ಲೇಖಕಿ ಡಿ ಸುಜಲಾದೇವಿ ಹಾಗೂ “ನಮ್ಮ ನಡಿಗೆ ಸರಕಾರಿ ಶಾಲೆಯ ಕಡೆಗೆ” ಅಭಿಯಾನದ ಮಂಜುನಾಥ್ ಕಾಳಿಂಗಪ್ಪ ಅವರನ್ನು ಗೌರವಿಸಲಾಯಿತು.
ಸತ್ಯ ಹರಿಹಳ್ಳಿ ಸರ್ವರನ್ನೂ ಸ್ವಾಗತಿಸಿದರು, ಪ್ರಕಾಶ್ ವಂದಿಸಿದರು, ಹೆಚ್ ಡಿ ಸೋಮೇಶ್ ನಿರೂಪಿಸಿದರು. ವೇದಿಕೆಯ ಅಧ್ಯಕ್ಷ ಕೃಷ್ಣಮೂರ್ತಿ, ಸಿದ್ದಬಸವೇಗೌಡ, ಜಿಜಿ ನಾರಾಯಣ ಶರ್ಮ, ಕಿರಣ್, ಮಲ್ಲೇಶ್, ಚಂದ್ರಶೇಖರ್, ತೇಜಾವತಿ, ಮಂಜುಳಾ ನಾಗರಾಜ್ ಮುಂತಾದವರು ಉಪಸ್ಥಿತರಿದ್ದರು.
ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
