ಆಲೂರು: ತಾಲ್ಲೂಕಿನ ಪಾಳ್ಯ ಗ್ರಾಮದಲ್ಲಿ ಪತ್ನಿಯೊಬ್ಬಳು ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾದನೆಂದು ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲ್ಲಲು ಸ್ಕೆಚ್ ಹಾಕಿದ್ದ ಭಯಾನಕ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದ್ರಾಕ್ಷಾಯಿಣಿ ಹಾಗೂ ಪ್ರತಾಪ್ ಎಂಬುವರು ಕೆಲ ತಿಂಗಳ ಹಿಂದೆ ಮದುವೆ ಆಗಿ ದಾಂಪತ್ಯ ಜೀವನ ನಡೆಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ದ್ರಾಕ್ಷಾಯಿಣಿ ಹಾಗೂ ಪ್ರವೀಣ್ ಎಂಬಾತನ ನಡುವೆ ಸ್ನೇಹ ಮೊಳೆತು ಅದು ಅಕ್ರಮ ಸಂಬಂಧಕ್ಕೆ ತಿರುಗಿತ್ತು. ಈ ಸಂಬಂಧಕ್ಕೆ ಪತಿ 7 ಪ್ರತಾಪ್ ಅಡ್ಡಿಯಾದ ಹಿನ್ನೆಲೆಯಲ್ಲಿ, ಈತನನ್ನು ಹೀಗೆಯೇ ಬಿಟ್ಟರೆ ತಮ್ಮ ಸ್ವೇಚ್ಛಾಚಾರಕ್ಕೆ ಅಡ್ಡಿಯಾಗುತ್ತಾನೆ ಎಂದು ಕೈ ಹಿಡಿದ ಗಂಡನನ್ನೇ ಕೊಂದು ಮುಗಿಸಲು ಪ್ಲಾನ್ ಮಾಡಿದಳು. ಇದಕ್ಕಾಗಿ ದಾಕ್ಷಾಯಿಣಿ, ಪ್ರಿಯಕರ ಪ್ರವೀಣನ ನೆರವು ಪಡೆದಿದ್ದಳು.
ಮೂಲಗಳ ಮಾಹಿತಿ ಪ್ರಕಾರ, ಇಬ್ಬರು ಸೇರಿ ಮದ್ಯ ಮತ್ತು ಊಟದಲ್ಲಿ ವಿಷ ಹಾಕುತ್ತಾ ನಿಧಾನವಾಗಿ ಕೊಲ್ಲುವ ಯೋಜನೆ ರೂಪಿಸಿದ್ದರು. ಇದನ್ನು ಹೇಗೋ ತಿಳಿದಿದ್ದ ಪ್ರತಾಪ್, ತನ್ನ ಪತ್ನಿಯ ಮೇಲೆ ಅನುಮಾನ ಮೂಡಿ, ಒಂದು ತಿಂಗಳ ಕಾಲ ಮನೆಯಲ್ಲೇ ವಾಯ್ಸ್ ರೆಕಾರ್ಡರ್ ಇಟ್ಟು ಪತ್ನಿಯ ಮಾತುಕತೆ ರೆಕಾರ್ಡ್ ಮಾಡುತ್ತಿದ್ದ. ಇದೀಗ ಪತ್ನಿಯ ಕರ್ಮಕಾಂಡ ಎಲ್ಲವೂ ತಿಳಿದು ಹೋಗಿದೆ. ಅಷ್ಟೇ ಅಲ್ಲ ಪತ್ನಿಯ ದುಷ್ಕೃತ್ಯ ಹಾಗೂ ಪ್ರವೀಣ್ನ ಸಹಕಾರದ ವಿಷಯಗಳು ಬಯಲಾಗಿವೆ. ಪ್ರತಾಪ್ ದೂರು ಆಧಾರ ವಾಗಿ ಪೊಲೀಸರು ತನಿಖೆ ಪ್ರಾರಂಭಿಸಿದ್ದು, ದ್ರಾಕ್ಷಾಯಿಣಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಈ ನಡುವೆ ಪ್ರವೀಣ್ ಎಸ್ಕೇಪ್ ಆಗಿರುವ ಕುರಿತು ವರದಿಯಾಗಿದೆ.
ಈ ಘಟನೆ ಇಲ್ಲಿನ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸಾರ್ವಜನಿಕರಲ್ಲಿ ಭೀತಿಯ ವಾತಾವರಣ ಮೂಡಿಸಿದೆ. ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
