ಭರವಸೆಯ ಬೆಳಗಿನ ರತ್ನದೀಪ..
ಶ್ರೀ ಸಿದ್ಧಗಂಗಾಕ್ಷೇತ್ರದ ಪೀಠಾಧ್ಯಕ್ಷರಾದ
ಪೂಜ್ಯ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು.
ಶ್ರೀ ಸಿದ್ಧಗಂಗಾ ಕ್ಷೇತ್ರಾಧ್ಯಕ್ಷರು ಶ್ರೀ ಮುನಿ ನಿರಂಜನ ನಿರಾಭಾರಿ ಪ್ರಣವಸ್ವರೂಪಿಗಳು ಆದ ಶ್ರೀ ಶಿವಕುಮಾರ
ಮಹಾಸ್ವಾಮಿಗಳವರ ಕರಕಮಲ ಸಂಜಾತರೆನಿಸಿ ಆರಿಸಲ್ಪಟ್ಟಿರುವ ಶ್ರೀಸಿದ್ಧಲಿಂಗ ಮಹಾಸ್ವಾಮಿಗಳ ಪೂರ್ವಾಶ್ರಮದ ಹೆಸರು ‘ವಿಶ್ವನಾಥ’ ಎಂದು ತಾಯಿ ಶ್ರೀಮತಿ ಶಿವರುದ್ರಮ್ಮ ತಂದೆ ಶ್ರೀ ಸದಾಶಿವಯ್ಯ,
ಈ ಶರಣದಂಪತಿಗಳ ಕೊನೆಯ ಮಗುವಾಗಿ ಜನ್ಮತಾಳಿದ್ದು ದಿನಾಂಕ 22-07-1963ರ ಬ್ರಾಹ್ಮ ಮುಹೂರ್ತದಲ್ಲಿ, ಶಿವಶರಣರ ಆಡುಂಬೊಲದಂತಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆ ಮಾಗಡಿ ತಾಲ್ಲೂಕು ಕಂಚುಗಲ್ ಬಂಡೇಮಠ ಶ್ರೀಗಳ ಜನ್ಮಸ್ಥಳ.
ಬಂಡೇಮಠ ಸಹಜವಾಗಿಯೇ ಸುತ್ತಲೂ ಧಾರ್ಮಿಕ ಪರಿಸರವುಳ್ಳ ಪುಟ್ಟಗ್ರಾಮ. ಇದರ ಸುತ್ತಮುತ್ತ ಸುಮಾರು 8-10 ಕಿ.ಮೀ.ಅಸುಪಾಸುನಲ್ಲಿ ಅನೇಕ ಶರಣರ ಗದ್ದುಗೆಗಳು, ಪುಣ್ಯಕ್ಷೇತ್ರಗಳು, ಮಠಮಾನ್ಯಗಳಿವೆ. ಆ ಗ್ರಾಮದಲ್ಲಿಯೇ ಬಂಡೇಮಠದ ಗುರುಪರಂಪರೆಯ ಅನೇಕ ಗದ್ದುಗೆಗಳಿವೆ. ಅವುಗಳಲ್ಲಿ ಪ್ರಮುಖವಾಗಿ ಕಂಚುಗಲ್ಲಪ್ಪನವರ ಗದ್ದುಗೆ ಇದೆ. ಈ ಶರಣರಿಂದಲೇ ಕಂಚುಗಲ್ ಬಂಡೇಮಠವೆಂದು ಹೆಸರು ಬರಲು ಕಾರಣವಾಯಿತೆಂದು ಹೇಳುತ್ತಾರೆ. ಸನಿಹದಲ್ಲಿಯೇ ಏಕಶಿಲಾ ರೂಪ ಬೃಹತ್ ಬಂಡೆಯ ಮೇಲೆ ಶ್ರೀ ಮಹಾಲಿಂಗೇಶ್ವರ ದೇವಾಲಯವಿದೆ. ಚೋಳರ ವಾಸ್ತುಶಿಲ್ಪ ರಚನೆಯ ಕಲ್ಲಿನ ದೇವಾಲಯ ತನ್ನ ಇತಿಹಾಸವನ್ನು ಸಾರುತ್ತಿದೆ.
ಈ ಧಾರ್ಮಿಕ ಪ್ರಭಾವಲಯದ ಪುಣ್ಯಪರಿಸರದ ಬಂಡೆಯ ಮೇಲೆ ನಿರ್ಮಿಸಿದ ಬಂಡೇಮಠದ ಸದ್ಯದ
ಮಠಾಧಿಪತಿಗಳು ಶ್ರೀ ಶಿವರುದ್ರಸ್ವಾಮಿಗಳವರು. ಮಠಾಧೀಶರಿಗೆ ಹೇಳಿ ಮಾಡಿಸಿದ ಮುಗ್ಧ ಮನೋಭಾವದ ಪುಣ್ಯಮೂರ್ತಿಗಳು, ಶ್ರೀ ಸಿದ್ಧಗಂಗಾ ಮಠದ ಗುರುಪರಂಪರೆಯ ನಿಕಟ ಸಂಪರ್ಕ ಹೊಂದಿ ಅಪ್ಪಟ ಸಂನ್ಯಾಸಿಯಾಗಿ ರೂಪುಗೊಂಡ ಶಿವಯೋಗಿಗಳು, ಶ್ರೀ ಉದ್ದಾನ ಶಿವಯೋಗಿಗಳ ಸೇವಾಭಾಗ್ಯದಿಂದ ಪುನೀತರಾಗಿ ಶ್ರೀ ಶ್ರೀ ಶಿವಕುಮಾರಸ್ವಾಮಿಗಳ ಅಂತರಂಗದ ಒಡನಾಡಿಯಾಗಿ ಬೆಳೆದು ಬಂದ ಸಂನ್ಯಾಸಿಗಳು. ಅವರ ಸರಳ ಸಜ್ಜನಿಕೆ, ಸಾಧುತ್ವಗಳು ಎಂಥವರನ್ನು ಮುಗ್ಧರನ್ನಾಗಿಸುತ್ತವೆ.
ಕಪಟ, ಕುಟಿಲ, ಕುಯಕ್ತಿಗಳನ್ನರಿಯದ ಶುದ್ಧಸಾತ್ವಿಕ ಮೂರ್ತಿಯಾದ ಶ್ರೀ ಶ್ರೀ ಶಿವರುದ್ರಸ್ವಾಮಿಗಳವರ ಪೂರ್ವಾಶ್ರಮದ ಸೋದರಿಯೇ ಶ್ರೀಮತಿ ಶಿವರುದ್ರಮ್ಮನವರು. ಶ್ರೀಮತಿ ಶಿವರುದ್ರಮ್ಮನವರು ಸಹಜ ಸಾತ್ವಿಕ ಪರಿಸರದಲ್ಲಿ ಬೆಳೆದು ಬಂದವರು. ಗುರುಲಿಂಗಜಂಗಮ ಸೇವಾಕೈಂಕರ್ಯದಲ್ಲಿ ನಿರತವಾಗಿ ಸಾತ್ವಿಕ ಸಾಧ್ಯ ಶಿರೋರತ್ನವೆಂದು ಕೀರ್ತಿಪಾತ್ರರಾಗಿರುವ ಶ್ರೀಮತಿಯವರು ಪತಿಗೆ ಹಿತರಾಗಿ ಗುರುಲಿಂಗ ಜಂಗಮ ಪ್ರೇಮಿಗಳಾಗಿ ತುಂಬು ಬಾಳನ್ನು ಬಾಳಿದವರು, ಸದ್ಗೃಹಿಣಿಯಾಗಿ, ತಾಯ್ತನದ ಆದರ್ಶೆಯೆನಿಸಿ ಗೃಹಕೃತ್ಯದ ಜೊತೆಗೆ ಮಠದ ಧಾರ್ಮಿಕ
ಕ್ರಿಯೆಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ ಸೌಜನ್ಯ ಸ್ವಭಾವಶೀಲರು. ಪತಿ ಸದಾಶಿವಯ್ಯನವರೊಡನೆ ನಿಷ್ಕಾಪಟ್ಟ ದಾಂಪತ್ಯ ಜೀವನದಲ್ಲಿ ಸುಖಕಂಡವರು.
ಶ್ರೀ ಸದಾಶಿವಯ್ಯನವರು ಋಜುಸ್ವಭಾವದ ಸತ್ಯವಾದಿಗಳು, ಆದರ್ಶ ಉಪಾಧ್ಯಾಯರು. ನ್ಯಾಯನಿಷ್ಠರಿಗಳು, ಗುರುದೈವ ಸೇವಾಕಾಂಕ್ಷಿಗಳು, ದಾಸೋಹಂಭಾವಿಗಳು. 6 ಜನ ಗಂಡುಮಕ್ಕಳು ಮತ್ತು 2 ಹೆಣ್ಣು ಮಕ್ಕಳನ್ನು ಸಾಕಿ ಸಲಹಿದ ಕ್ಷಮಯಾಧರಿತ್ರಿ ಎನಿಸಿದ್ದ ಶ್ರೀಮತಿ ಶಿವರುದ್ರಮ್ಮನವರು ಪತಿಯು ಪಾರ್ಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದು ಮಲಗಿದಾಗ ಮಾಡಿದ ಸೇವೆಯಲ್ಲಿನ ಸಹನಾ ಸ್ವಭಾವ ಪರಮ ಪತಿವ್ರತಾಧರ್ಮ ದ್ಯೋತಕವೆನಿಸಿದುದಾಗಿದೆ. ಈ ಕಾರಣವಾಗೇ ಲಿಂಗೈಕ್ಯರಾದ ಪತಿಯ ವಿಯೋಗ ಶ್ರೀಮತಿ ಶಿವರುದ್ರಮ್ಮನವರಿಗೆ ಸಹಿಸಲಾಗದ ದುಃಖಸಂಕಟ ತಂದಿತು. ತಾಯಿ ತಂದೆಗಳ ಗುಣಸ್ವಭಾವಗಳನ್ನು ಮೈಗೂಡಿಸಿಕೊಂಡು ಬೆಳೆದ ಶ್ರೀ ಸಿದ್ದಲಿಂಗ ಸ್ವಾಮಿಗಳವರ ಪ್ರಾಥಮಿಕ ವಿದ್ಯಾಭ್ಯಾಸ ಬಂಡೇಮಠದಲ್ಲಿಯೇ ನಡೆಯಿತು. ತಂದೆಯೊಡನೆ ಕೂಡಿ ನಲಿಯುವ ಸುಯೋಗ ದೊರೆಯದಿದ್ದರೂ ಅಣ್ಣ ಅಕ್ಕಂದಿರ ಪ್ರೇಮಪೂರ್ಣ ಒಲವು ನಲಿವುಗಳಿಗೇನೂ ಕೊರತೆಯಿರಲಿಲ್ಲ. ಶ್ರೀಮತಿ ಶಿವರುದ್ರಮ್ಮನವರು ತಾಯಿ ತಂದೆ ಒಬ್ಬರೇ ಆಗಿ ಕಿರಿಯ ಮಗನ ಪಾಲನೆ ಯಾವ ಕುಂದೂ ಬರದಂತೆ ನೋಡಿಕೊಂಡರು. ಚುರುಕು ಸ್ವಭಾವ, ಸದಾ ಚಟುವಟಿಕೆಯ೦ದಿರುವುದು, ಆಲಸ್ಯವು ಇವರ ಬಳಿಯೇ ಸುಳಿಯುತ್ತಿರಲಿಲ್ಲ. ಕ್ರಿಯಾಶೀಲತ ಇವರ ಹುಟ್ಟುಗುಣವಾಗಿತ್ತು.ಬಾಲ್ಯ ಸಹಜವಾದ ಆಟೋಟಗಳಲ್ಲಿ ತುಂಬಾ ಆಸಕ್ತಿ,ಚಟುವಟಿಕೆಯಿಂದಿರುವ ಮಕ್ಕಳು ಆಟಪಾಟಗಳಲ್ಲಿ ಓದು ಬರಹದಲ್ಲಿ ಕಲಿಕೆ ಅಭ್ಯಾಸಗಳಲ್ಲಿ ಮುಂದಿರುವುದು ಅನುಭವ ವೇದ್ಯವಾದುದು. ಅಂತೆಯೇ ಈ ಬಾಲಕ ಸದಾ ಲವಲವಿಕೆಯಿಂದ,ಹಸನ್ಮುಖಿಯಾಗಿ ಮತ್ತು ಗುರುಹಿರಿಯರನ್ನು ಕಂಡರೆ ಭಕ್ತಿ ಗೌರವ ತೋರುತ್ತಾ ಮಠದ ಮುಂದ ಓಡಾಡುವುದನ್ನು ಕಂಡ
ಶ್ರೀ ಶ್ರೀ ಶಿವರುದ್ರಸ್ವಾಮಿಗಳವರು ಚಕಿತರಾಗುತ್ತಿದ್ದರು,
ಈ ಬಾಲಕನ ಅಸಾಧಾರಣ ವರ್ಚಸ್ಸನ್ನು ಸೂಕ್ಷ್ಮವಾಗಿ ಗ್ರಹಿಸಿದರು.ಮುಂದ ಓದುವ ವ್ಯವಸ್ಥೆಗೆ ಅಣಿಮಾಡಿದರು. ಪ್ರೌಢಶಾಲಾ ವಿದ್ಯಾಭ್ಯಾಸಕ್ಕೆ ಕನಕಪುರದ ದೇಗುಲಮಠಕ್ಕೆ ಕಳುಹಿಸಿದರು.ಶ್ರೀ ಸಿದ್ಧಗಂಗಾಮಠದ ಶ್ರೀ ಉದ್ದಾನಶಿವಯೋಗಿಗಳ ಪೂರ್ಣಾನುಗ್ರಹ ಕೃಪೆಗೆ ಪಾತ್ರರಾದ ಮತ್ತು ಶ್ರೀ ಶಿವಕುಮಾರಸ್ವಾಮಿಗಳವರ ಒಡನಾಡಿಗಳು ,ಆತ್ಮೀಯ ಸ್ನೇಹಭಾವವುಳ್ಳವರು ಸದಾ ಪ್ರಸನ್ನಮುಖಮುದ್ರೆಯ ಸಾತ್ವಿಕಮೂರ್ತಿಗಳೂ ಆಗಿದ್ದ ಕನಕಪುರದ ಶ್ರೀ ಮಹಾಲಿಂಗಸ್ವಾಮಿಗಳವರ ಸನ್ನಿಧಿಯಲ್ಲಿ ಆಶ್ರಯ ಪಡೆದು ತಮ್ಮ ಭಕ್ತಿ, ವಿನಯ ಸೌಹಾರ್ದತೆಗಳಿಂದ
ಅಲ್ಲಿ ಎಲ್ಲರ ಪ್ರೀತಿ ವಿಶ್ವಾಸಗಳಿಗೆ ಪಾತ್ರರಾದರು.
ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಅಲ್ಲಿಯೇ ಮುಗಿಸಿದರು. ಶ್ರೀ ಮಹಾಲಿಂಗ ಸ್ವಾಮಿಗಳವರ ಸಾನ್ನಿಧ್ಯದಿಂದ ಗುರು ಲಿಂಗ ಜಂಗಮರಲ್ಲಿ ಭಕ್ತಿಭಾವಗಳು ಬೆಳೆಯಲು ಕಾರಣವಾಯಿತು.ಅವರ ನಿರುತರ ಬಿಡುವಿಲ್ಲದ ಭಕ್ತರ ಮನೆಗಳ ಪೂಜೆಗಳ ಮಧ್ಯೆಯು ಮಾಡುವ ಕೆಲಸಕಾರ್ಯಗಳನ್ನು ಕಂಡು ಸ್ಫೂರ್ತಿಗೊಂಡರು. ಶರಣರ, ಸಂತರ ಜೀವನ ಚರಿತ್ರೆಗಳ ಅಭ್ಯಾಸ ಅನೇಕ ಮಠಾಧಿಪತಿಗಳು ಬಂದು ಹೋಗುವ ಸನ್ನಿವೇಶಗಳು
ಕನಕಪುರದಲ್ಲಿ ಒಂದು ರೀತಿಯ ಹೊಸ ಅನುಭವವನ್ನ, ಅನುಗ್ರಹರೂಪವಾಗಿ ಪಡೆಯುವ ಸದವಕಾಶ ದೊರಕಿತ್ತು.
ಶ್ರೀ ಶ್ರೀ ಶಿವರುದ್ರಸ್ವಾಮಿಗಳು ಶ್ರೀ ಮಹಾಲಿಂಗ ಸ್ವಾಮಿಗಳವರ ಸೂಚನೆಯಂತೆ ಈ ಸಂಸ್ಕಾರಿ ವಟುವನ್ನು ಶ್ರೀ ಸಿದ್ಧಗಂಗಾ ಗುರುಕುಲಕ್ಕೆ ತಂದು ಮಹಾ ಮಹಿಮರ ಪದತಲಕ್ಕೊಪ್ಪಿಸಿ ಆಶ್ರಯ ಕೋರಿದರು. ಪೂಜ್ಯ ಶ್ರೀ ಶ್ರೀ ಶಿವಕುಮಾರಗುರುಗಳ ಕರುಣೆಯಿಂದ ಶ್ರೀ ಹಳೇಮಠದಲ್ಲಿ ವಾಸ್ತವ ದೊರತಿ, ಅಭ್ಯಾಸ ಆರಂಭಮಾಡಿದರು. ಶ್ರೀಗಳ ಪೂಜಾ ಸೇವಾ ಕಾರ್ಯದಲ್ಲಿ ನಿಯುಕ್ತರಾದರು.
ಶ್ರದ್ಧಾಭಕ್ತಿಗಳಿಂದ ಆಲಸ್ಯ ನಿರುತ್ಸಾಹಗಳು ತಲೆದೋರದ ಸೇವೆಯಲ್ಲಿ ತಮ್ಮನ್ನುಸಮರ್ಪಿಸಿಕೊಂಡರು. ನಡೆನುಡಿ, ಸಚ್ಚಾರಿತ್ರ್ಯಗಳಿಂದ ತಮ್ಮನ್ನು ಇತರರಿಗಿಂತಲೂ ಭಿನ್ನವಾಗಿ ಗುರುತಿಸಿಕೊಂಡರು. ಪೂಜ್ಯ ಶ್ರೀ ಶ್ರೀ ಶಿವಕುಮಾರ ಮಹಾ ಶಿವಯೋಗಿಗಳ ಪೂರ್ಣವಾ ಕಟಾಕ್ಷಕ್ಕೆ ಒಳಗಾದರು.
ಸಂಕಷ್ಟ ಸಮಯದಲ್ಲಿ ದೊರೆತ ಅಮೃತ ಫಲದಂತ, ಶ್ರೀ ಸಿದ್ಧಗಂಗಾ ಮಠಕ್ಕೆ ವಟುವಾಗಲೊಪ್ಪಿದ್ದು, ಶ್ರೀ ಮಠದ
ಸೌಭಾಗ್ಯವೆಂದೇ ಭಾವಿಸಬೇಕು. ಜೊತೆಗೆ ಶ್ರೀ ಸಿದ್ಧಗಂಗಾ ಮಠದ ಗುರುವರಂವರೆಯ ಸುತ್ತ ಸುಪ್ತ ಚೈತನ್ಯದ ಪ್ರಭಾ ಪುಂಜ ಪ್ರೇರಿತವೆಂದು ಭಾವಿಸಿದರೂ ಸರಿಯೇ 1988 ಜನವರಿ 29ರ ಬ್ರಾಹ್ಮೀ ಮುಹೂರ್ತದಲ್ಲಿ ಷಟ್ಸ್ಥಲಬ್ರಹೋಪದೇಶಪೂರ್ವಕ ವಿರಕ್ತಾಶ್ರಮ(ಚರಜಂಗಮ ದೀಕ್ಷೆ) ಸ್ವೀಕಾರ ಸಮಾರಂಭ ನಡೆದು ಹೋಯಿತು. “ಪ್ರಕೃತಿಸ್ಸಾಂನಿಯೋತಿ” ಪ್ರಕೃತಿಯೇ ಮನುಷ್ಯನನ್ನು ಒತ್ತಾಯದಿಂದ ತನ್ನಿಷ್ಟದಂತ ಕೆಲಸ ಮಾಡಿಸುತ್ತದೆ ಎಂದು ನೀತಿ ಹೇಳಿದಂತೆ ದೈವವೂ ತನ್ನಿಷ್ಟದಂತೆ ಮನುಷ್ಯನನ್ನು ನಾನಾ ಕೆಲಸದಲ್ಲಿ ಪ್ರೇರೇಪಿಸುತ್ತದೆ. ಬಲಾತ್ಕಾರವಾಗಿ ಮತ್ತೊಂದೆಡೆ ಸೆಳೆಯುತ್ತದೆ ಸಿದ್ಧಗಂಗಾ ಮಠದ ಉತ್ತರಾಧಿಕಾರಿಯಾಗುತ್ತಾರೆಂದು ಯಾರು ಕುಡಿದ್ದರು.
ಅಂದುಕೊಂಡಿದ್ದು ಒಂದು ಆದದ್ದು ಮತ್ತೊಂದು 1988 ಮಾರ್ಚ್ 31 ರಂದು ಬ್ರಾಹ್ಮೀ ಮುಹೂರ್ತದಲ್ಲಿ ಸಂಸ್ಕಾರ ಪೂರ್ಣ ನಿರಂಜನ ನಿರಾಭಾರಿ ಪಟ್ಟಾಧಿಕಾರಮಹೋತ್ಸವ ವಿಧಿವತ್ತಾಗಿ ಜರುಗಿತು. ಶ್ರೀ ಸಿದ್ಧಲಿಂಗ ಸ್ವಾಮಿಗಳು ಶ್ರೀ ಸಿದ್ಧಗಂಗಾ ಮಠದ ಸಿದ್ಧಪುರುಷರ ಪರಂಪರೆಯಲ್ಲಿ ಸಮ್ಮಿಳಿತರಾದರು. ಅದೊಂದು ಅವಿಸ್ಮರಣೀಯ ಅಪೂರ್ವ ಸಮಾರಂಭ ಬೆಕ್ಕಸಬೆರಗಾಗುವಂತೆ ನಡೆದು ತನ್ನನ್ನು ದಾಖಲಿಸಿಕೊಂಡಿತು. ಶ್ರೀಮಠದ ಭಕ್ತವರ್ಗ ಹರ್ಷಸಮುದ್ರದಲ್ಲಿ ಮುಳುಗಿತು.
“ಎಲ್ಲರ ಕಷ್ಟ ತನಗಿರಲಿ” “ಸುಖದ ಬಾಳು ನಿಮಗಿರಲಿ” ಎಂದು ಹಾರೈಸಿ ಜಗತ್ತಿನ ಅಳಲು ದುಃಖದುಮ್ಮಾನದ
ಭಾರವನ್ನು ಹೊತ್ತು ಮಹಾಚೇತನದ ದಿವ್ಯ ದೀಧಿತಿಯ ಮುಂದೆ ನಾನೆಷ್ಟರವನು? ಮೇರು ಸದೃಶ ವ್ಯಕ್ತಿತ್ವದ ಜ್ಯೋತಿಯ ಪ್ರಭಾವಲಯದಲ್ಲಿ ಬಾಳು ಬೆಳಗಿಸಲು ಬಂದ ನನಗೆ ದೊರೆತ ಅನಿರೀಕ್ಷಿತ ಆಸ್ಫೋಟ ಎಂದು ಭಾವಿಸಿದಂತೆ ಭಕ್ತರಿಗೆ ತೋರಿತು..
ಶ್ರೀ ಕ್ಷೇತ್ರದಲ್ಲಿ. ಶ್ರೀ ಶ್ರೀ.ಶಿವಕುಮಾರ ಮಹಾಸ್ವಾಮೀಜಿಯನ್ನು.. ಶ್ರೀ ಸಿದ್ದಲಿಂಗ ಸ್ವಾಮೀಜಿಯಲ್ಲಿ ನಾವೆಲ್ಲ ಕಾಣುತ್ತಿರುವುದು ನಮ್ಮೆಲ್ಲರ ಸೌಬಾಗ್ಯ.. ಹುಟ್ಟು ಹಬ್ಬದ ಈ ಶುಭದಿನದಂದು ಪರಮಪೂಜ್ಯರಿಗೆ ಭಗವಂತ ಹೆಚ್ಚಿನ ಆಯಸ್ಸು ಶಕ್ತಿಯನ್ನು ನೀಡಲಿ ಎಂದು ಭಕ್ತಿ ಪೂರ್ವಕವಾಗಿ ಪ್ರಾರ್ಥಿಸುತ್ತೇವೆ.
ಯಡೇಹಳ್ಳಿ”ಆರ್”ಮಂಜುನಾಥ್.
