ಆಲೂರು : “ಯೇಸುಕ್ರಿಸ್ತ ” ರು ಜಗತ್ತಿಗೆ ಪ್ರೀತಿ, ದಯೆ, ಕರುಣೆಯ ಸಂದೇಶ ಸಾರಿ, ಲೋಕ ಕಲ್ಯಾಣಕ್ಕಾಗಿ ಶಿಲುಬೆಗೇರಿದ ದೇವರು ಎಂದು ಕಣತೂರು ‘ಚಿಯೋನ್’ ಚಾರಿಟಬಲ್ ಚರ್ಚ್ ನ ಫಾದರ್ ಉಮೇಶ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ರಿಸ್ಮಸ್ ಹಬ್ಬ ಯೇಸುವಿನ ಜನ್ಮದಿನದ ಸಂಭ್ರಮವಾಗಿದ್ದು, ಜಗತ್ತಿಗೆ ಶಾಂತಿ, ಸಂತೋಷ ತಂದಿದೆ ಎಂಬ ನಂಬಿಕೆಯೊಂದಿಗೆ ಪ್ರತಿ ವರ್ಷ ಡಿ 25 ರಂದು ಕ್ರಿಸ್ಮಸ್ ಹಬ್ಬ ಆಚರಿಸಲಾಗುತ್ತಿದೆ. ತಾಲೂಕಿನ ಕಣತೂರು ಗ್ರಾಮದಲ್ಲಿ ಚಿಯೋನ್ ಚರ್ಚ್ ಪ್ರಾರಂಭವಾಗಿ 10 ವರ್ಷಗಳು ತುಂಬಿದ್ದು, ಚರ್ಚಿನಲ್ಲಿ ವಿಶೇಷ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಭಕ್ತರ ಎಲ್ಲಾ ಇಷ್ಟ, ಅಭಿಲಾಷೆಗಳನ್ನು ಪೂರೈಸುವ ಜೊತೆಗೆ ಎಲ್ಲರಲ್ಲೂ ಪ್ರೀತಿ, ವಿಶ್ವಾಸವನ್ನು ಚಿಯೋನ್ ಚರ್ಚ್ ಗಳಿಸಿದೆ. ಡಿ 24 ಹಾಗೂ 25 ರಂದು ಚಿಯೋನ್ ಚರ್ಚ್ ನಲ್ಲಿ ಧಾರ್ಮಿಕ ಆಚರಣೆಯೊಂದಿಗೆ ಪ್ರಾರ್ಥನೆ, ವಿಶೇಷಪೂಜೆ, ಬಲಿ ಪೂಜೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಡಿ 25 ರ ಕಾರ್ಯಕ್ರಮಕ್ಕೆ ಶಾಸಕ ಸಿಮೆಂಟ್ ಮಂಜು, ತಾ ಪಂ ಮಾಜಿ ಸದಸ್ಯ ನಟರಾಜ್ ನಾಕಲಗೂಡು ಸೇರಿದಂತೆ ಕಣತೂರು ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರನ್ನು ಆಹ್ವಾನಿಸಲಾಗುವುದು ಎಂದ ಅವರು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಸ್ಮಸ್ ಸಂಭ್ರಮಕ್ಕೆ ಆಗಮಿಸುವಂತೆ ಮನವಿ ಮಾಡಿದರು.
ಫಾದರ್ ಸುರೇಶ್ ಮಾತನಾಡಿ, ಏಸುಕ್ರಿಸ್ತರು ಮೇರಿ, ಜೋಸೆಫ್ ದಂಪತಿಗಳ ಪುತ್ರರಾಗಿ ಬೆತ್ಲೆಹೇಮ್ ನಲ್ಲಿ ಜನಿಸಿದರು. ಕ್ರಿಸ್ತರು ಹುಟ್ಟುವ 500 ವರ್ಷಗಳ ಮೊದಲೇ ಪ್ರವಾದಿ ಯೆಶಾಯನು ಯೇಸು ಜನುಮದ ಕುರಿತು ನುಡಿದಿದ್ದರು. ಕ್ರಿಸ್ಮಸ್ ಹಬ್ಬ ಕೇವಲ ಹಬ್ಬವಲ್ಲ, ಇದು ಶಾಂತಿ, ಸಂತೋಷ, ಪ್ರೀತಿ ತುಂಬುವ ಹಾಗೂ ಹಂಚುವ ಹಬ್ಬವಾಗಿದೆ. ಚಿಯೋನ್ ಚರ್ಚ್ ನಲ್ಲಿ ಡಿ 24 ಹಾಗೂ 25 ರಂದು ನಡೆಯುವ ಕ್ರಿಸ್ಮಸ್ ಕಾರ್ಯಕ್ರಮಕ್ಕೆ ಭಕ್ತಾದಿಗಳು ಭಾಗವಹಿಸುವ ಮೂಲಕ ದೇವರ ಕೃಪೆಗೆ ಪಾತ್ರರಾಗುವಂತೆ ತಿಳಿಸಿದರು.
