ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಸತೀಶ್ ಪಟೇಲ್ ತಾಲೂಕು ಅಧ್ಯಕ್ಷ ರಮೇಶ್ ಪೂಜಾರಿ ಹಾಗೂ ಸಂಪೂರ್ಣ ಕರವೇ ತಂಡ ಪುರಸಭೆ ಯ ಬಳಿ ಪ್ರತಿಭಟನೆ ಹಮ್ಮಿಕೊಂಡಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಜಿಲ್ಲಾ ಅಧ್ಯಕ್ಷ ಸತೀಶ್ ಪಟೇಲ್ ಸುಭಾಷ್ ಮೈದಾನದಲ್ಲಿ ಕಸದ ರಾಶಿ ತುಂಬಿ, ಅದರ ದುರ್ವಾಸನೆಯಿಂದ ಎರಡು ಕಿಲೋ ಮೀಟರ್ ವ್ಯಾಪ್ತಿಯವರೆಗೂ ಜನರು ಉಸಿರಾಟದ ತೊಂದರೆ ಅನುಭವಿಸುತ್ತಿದ್ದಾರೆ. ಇದೇ ಮೈದಾನದಲ್ಲಿ ಮಕ್ಕಳಿಗೆ ಕ್ರೀಡೆ ನಡೆಸುತ್ತಿರುವುದು ಆರೋಗ್ಯದ ಮೇಲೆ ನೇರ ದಾಳಿ ಮಾಡಿದಂತಾಗಿದೆ. ಕಸದ ದುರ್ನಾತದಿಂದ ಸೊಳ್ಳೆ, ಕೀಟ, ವಿಷ ಜಂತುಗಳ ವೃದ್ಧಿ ಕಂಡುಬರುತ್ತಿದ್ದು, ಈಗಾಗಲೇ ಅಲ್ಲಿನ ಕಾರ್ಮಿಕರು ಮಲೇರಿಯಾ, ಡೆಂಗ್ಯೂ ಕಾಯಿಲೆಗೆ ಒಳಗಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳ ಕ್ರೀಡೆ ಏರ್ಪಡಿಸಿರುವುದೇ ಒಂದು ಗಂಭೀರ ನಿರ್ಲಕ್ಷ್ಯವೆಂದು ಹೇಳಿದ್ದಾರೆ
ಶೌಚಾಲಯ ದುಸ್ಥಿತಿ – ಮಕ್ಕಳಿಗೆ ಅಪಾಯ.
ಶೌಚಾಲಯಕ್ಕೆ ಹೋಗಬೇಕಾದರೆ ಮಕ್ಕಳಿಗೆ ಮೂರು ಅಡಿ ಅಗಲದ ಚರಂಡಿ ದಾಟಬೇಕಾದ ಪರಿಸ್ಥಿತಿ. ಅದಕ್ಕಾಗಿ ಕೇವಲ ಎರಡು ಕಟ್ಟಿಗೆಯನ್ನೇ ಸೇತುವೆ ಮಾಡಲಾಗಿದೆ. ಕಾಲು ಜಾರಿ ಬಿದ್ದರೆ ಕಸದ ಚರಂಡಿಗೆ ಬಿದ್ದೇ ತೀರುವುದು. ಶೌಚಾಲಯದ ಪಕ್ಕದಲ್ಲೇ ಹತ್ತು ಅಡಿ ಆಳದ ನೀರಿನ ಟ್ಯಾಂಕ್ ಇದ್ದರೂ ನೀರಿನ ಸರಿಯಾದ ವ್ಯವಸ್ಥೆ ಇಲ್ಲ. ಹೆಸರಿಗೆ ಎರಡು ಅಡಿ ಮಾತ್ರ ನೀರು ಇದ್ದು, ಅದನ್ನು ಮಕ್ಕಳು ತಲುಪಲೂ ಆಗದ ಪರಿಸ್ಥಿತಿ. ಮಹಿಳಾ ಶಿಕ್ಷಕಿಯರು ಸಮೀಪದ ಮನೆಗಳಿಗೆ ಹೋಗಿ ಶೌಚಾಲಯ ಬಳಸಬೇಕಾದ ದುಸ್ಥಿತಿ ಇನ್ನೂ ಗಂಭೀರವಾಗಿದೆ ಎಂದು ಕರವೇ ತಾಲೂಕು ಅಧ್ಯಕ್ಷ ರಮೇಶ್ ಪೂಜಾರಿ ತಿಳಿಸಿದ್ದಾರೆ.
ಕ್ರೀಡೆಗೆ ಉಸ್ತುವಾರಿ ವಹಿಸಿರುವ ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ (TPO) ಕುಶ್ವಂತ್ ಅವರನ್ನು ವಿಚಾರಿಸಿದಾಗ, “ನನ್ನ ಕೆಲಸ ಕೇವಲ ಮಕ್ಕಳನ್ನು ಕರೆದು ಕ್ರೀಡೆ ನಡೆಸುವುದಷ್ಟೇ, ಮೂಲಸೌಕರ್ಯ ಹಾಗೂ ಮಕ್ಕಳ ಆರೋಗ್ಯಕ್ಕೆ ಸಂಬಂಧವಿಲ್ಲ” ಎಂಬ ಉದ್ದಟ ಉತ್ತರ ನೀಡಿರುವುದು ಸ್ಥಳೀಯರಲ್ಲಿ ಆಕ್ರೋಶ ಹುಟ್ಟಿಸಿದೆ. ಮಕ್ಕಳ ಕ್ರೀಡೆ, ಆಟದ ಮೈದಾನ, ಕ್ರೀಡಾ ಸಾಮಗ್ರಿಗಳ ನಿರ್ವಹಣೆ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿ ಹೊಣೆಗಾರಿಕೆ ವಹಿಸಬೇಕಾದವರ ನಿರ್ಲಕ್ಷ್ಯ ಜನರ ಕಣ್ಣಿಗೆ ಬಿದ್ದಿದೆ ಎಂದು ಹೇಳಿದ್ದಾರೆ
ಕರವೇ ಸಂಘಟನೆಯ ಆಗ್ರಹ
“ಮಕ್ಕಳ ಜೀವ ಭದ್ರತೆ ಕಡೆಗಣಿಸುವ ಅಧಿಕಾರಿಗಳು ಸಾಮಾನ್ಯ ಪ್ರಜ್ಞೆ ಇಲ್ಲದೆ ನಡೆದುಕೊಳ್ಳುತ್ತಿದ್ದಾರೆ. ಇಂತಹವರ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಕರವೇ ಸಂಘಟನೆ ಆಗ್ರಹಿಸಿದೆ. ಮಕ್ಕಳ ಆರೋಗ್ಯದ ಬೆಲೆಗೆ ಕ್ರೀಡೆ ನಡೆಸುತ್ತಿರುವುದನ್ನು ತಕ್ಷಣ ನಿಲ್ಲಿಸಿ, ಮೂಲಸೌಕರ್ಯಗಳ ಅಭಿವೃದ್ಧಿ ಮಾಡದಿದ್ದರೆ ತೀವ್ರ ಹೋರಾಟ ನಡೆಸುವುದಾಗಿ ಕರವೇ ತಾಲೂಕು ಅದ್ಯಕ್ಷರಾದ ರಮೇಶ್ ಪೂಜಾರಿ ತಾಕೀತು ಮಾಡಿದ್ದಾರೆ.
ಸೌಕರ್ಯಗಳ ಕೊರತೆ ಶಾಲಾ ಮಕ್ಕಳ ಹಿತಕ್ಕಿಂತ ಕ್ರೀಡೆ ದೊಡ್ಡದೆ?
ಕರವೇ ಆಕ್ರೋಶ.
ಸಕಲೇಶಪುರ ಸುಭಾಷ್ ಮೈದಾನದಲ್ಲಿ ಇಂದಿನ ದಿನಗಳಲ್ಲಿನ ಕೆಟ್ಟ ಪರಿಸ್ಥಿತಿ ಮಕ್ಕಳ ಆರೋಗ್ಯ ಮತ್ತು ಭದ್ರತೆ ಕಡೆಗಣಿಸಿರುವಂತೆ ತೋರುತ್ತಿದೆ. ಮೂಲಸೌಕರ್ಯಗಳ ಕೊರತೆ, ಕಸದ ರಾಶಿಯಿಂದ ಉಂಟಾದ ದುರ್ವಾಸನೆ ಹಾಗೂ ಶೌಚಾಲಯದ ದುಸ್ಥಿತಿಯ ನಡುವೆ ಮಕ್ಕಳಿಗೆ ಕ್ರೀಡೆ ಏರ್ಪಡಿಸಿರುವುದು ನಾಚಿಕೆಗೆಡಿನ ಸಂಗತಿ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಆಕ್ರೋಶ ವ್ಯಕ್ತಪಡಿಸಿದೆ.
