ಸಕಲೇಶಪುರ :- ಗ್ರಾಮಪಂಚಾಯಿತಿ ಸದಸ್ಯರೊಬ್ಬರು ತಮ್ಮ ಸ್ವಂತ ಹಣದಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಗೆ ನಾಮಫಲಕವನ್ನು ನಿರ್ಮಿಸಿಕೊಟ್ಟು ಸಮಾಜಕ್ಕೆ ಹಾಗೂ ಇತರರಿಗೆ ಮಾದರಿಯಾಗಿದ್ದಾರೆ.
ತಾಲ್ಲೂಕಿನ ಯಸಳೂರು ಹೋಬಳಿಯ ಚಂಗಡಹಳ್ಳಿ ಗ್ರಾಮ ಪಂಚಾಯತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಚಂಗಡಹಳ್ಳಿ ಶಾಲೆಯಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಶಾಲೆಗೆ ಸರಿಯಾದ ನಾಮಫಲಕ ವ್ಯವಸ್ಥೆ ಇರಲಿಲ್ಲ. ಚಂಗಡಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಧು ನಾಗೇನಹಳ್ಳಿ ಅವರ ಸಮಾಜಮುಖಿ ಕೆಲಸ ಮತ್ತು ಸರ್ಕಾರಿ ಶಾಲೆ ಹಾಗೂ ವಿದ್ಯಾರ್ಥಿಗಳ ಮೇಲೆ ಅಪಾರ ಅಭಿಮಾನವನ್ನು ಗಮನಿಸಿದ ಶಾಲೆಯ ಮುಖ್ಯೋಪಾಧ್ಯಾಯರು ಶಾಲೆಗೆ ನಾಮಫಲಕ ವ್ಯವಸ್ಥೆ ಮಾಡುವಂತೆ ಮನವಿ ಮಾಡಿಕೊಂಡಿದ್ದರು.
ಕೂಡಲೇ ಗ್ರಾಮ ಪಂಚಾಯಿತಿ ಸದಸ್ಯರಾದ ಮಧು ನಾಗೇನಹಳ್ಳಿ ತಮ್ಮ ಸ್ವಂತ ಹಣದಿಂದ ಅಚ್ಚುಕಟ್ಟಾದ ನಾಮಫಲಕದ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದಾರೆ.
ಇದರ ಉದ್ಘಾಟನಾ ಕಾರ್ಯಕ್ರಮವನ್ನು ಶಾಸಕರಾದ ಸಿಮೆಂಟ್ ಮಂಜು ನೆರವೇರಿಸಿ ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳಿಲ್ಲದೆ ಮುಚ್ಚುವ ಹಂತಕ್ಕೆ ತಲುಪುತ್ತಿದ್ದು ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಲು ಸರ್ಕಾರವು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು ಕೂಡ ವಿದ್ಯಾರ್ಥಿಗಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಪೋಷಕರು ಹಿಂದೆ ಮುಂದೆ ನೋಡುತ್ತಿದ್ದಾರೆ. ತಾವು ಓದಿದ ಸರ್ಕಾರಿ ಶಾಲೆಗಳು ಉಳಿಸಿ ಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಇಂತಹ ದಾನಿಗಳು ಮುಂದೆ ಬಂದು ಸರ್ಕಾರಿ ಶಾಲೆಗಳನ್ನು ಉಳಿಸುವ ಜೊತೆಗೆ ಸರ್ಕಾರಿ ಶಾಲೆಯಲ್ಲಿ ಕಲಿಯುವ ಮಕ್ಕಳಿಗೆ ಆತ್ಮ ವಿಶ್ವಾಸ ಮೂಡುವಂತಾಗುತ್ತದೆ . ಗ್ರಾಮ ಪಂಚಾಯಿತಿ ಸದಸ್ಯರ ಈ ಸಮಾಜಮುಖಿ ಕೆಲಸ ಸಮಾಜಕ್ಕೆ ಹಾಗೂ ಇತರರಿಗೆ ಮಾದರಿಯಾಗಲಿದೆ ಎಂದು ಪ್ರಸಂಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರು ಹಾಗೂ ಬಿಜೆಪಿ ಮುಖಂಡರು ಗ್ರಾಮಸ್ಥರು ಹಾಜರಿದ್ದರು.

