ಆಲೂರು:ಪ್ರತಿ ವರ್ಷ ತಾಳೂರು ಹಾಗೂ ಆಲೂರಿನ ಹೌಸಿಂಗ್ ಬೋರ್ಡ್ ನಲ್ಲಿರುವ ಆಂಜನೇಯ ದೇವಸ್ಥಾನದಲ್ಲಿ ಹನುಮ ಜಯಂತಿಯನ್ನು ಅದ್ದೂರಿಯಾಗಿ ಆಚರಿಸುತ್ತಿದ್ದು ಈ ಬಾರಿ ಶಾಸಕರಾದ ಸಿಮೆಂಟ್ ಮಂಜು ಮತ್ತು ಬೇಲೂರು ಶಾಸಕರಾದ ಹೆಚ್.ಕೆ ಸುರೇಶ್ ಅವರವಜೊತೆಯಲ್ಲಿ ಒಟ್ಟಿಗೆ ಭಾಗಿಯಾಗಿ ಪೂಜಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ತಾಳೂರಿನಲ್ಲಿ ವಿಶೇಷ ಪೂಜೆಯೊಂದಿಗೆ ಪ್ರಸಾದವಿನಿಯೋಗ ಮಾಡಿದರು,ಆಲೂರಿನಲ್ಲಿ ಜಾನಪದ ಕಲಾತಂಡ,ಡೊಳ್ಳುಕುಣಿತ,ಹಾಗೂ ವಿವಿಧ ನೃತ್ಯ ತಂಡಗಳಿಂದ ಪಟ್ಟಣದ ಮುಖ್ಯ ಬೀದಿಗಳಲ್ಲಿ ವಿಜೃಂಭಣೆಯಿಂದ ಮೆರವಣಿಗೆ ಮೂಲಕ ಜಯಂತಿಯನ್ನು ಆಚರಿಸಿದರು.
ವೆಂಕಟಾಚಲ ಮಹಾತ್ಮೆ ಮತ್ತು ಸ್ಕಂದ ಪುರಾಣದಲ್ಲಿ, ಹನುಮನ ತಾಯಿ ಅಂಜನಾ ದೇವಿಯು ತನಗೆ ಗಂಡು ಮಗು ಜನಿಸುವ ವರವನ್ನು ಕೋರಿ ಮಾತಂಗ ಋಷಿಯನ್ನು ಸಂಪರ್ಕಿಸಿದಳು ಎಂದು ವಿವರಿಸಲಾಗಿದೆ.ವೆಂಕಟಾಚಲದಲ್ಲಿ ತಪಸ್ಸು ಮಾಡಲು ಅವಳಿಗೆ ಸಲಹೆ ನೀಡಲಾಯಿತು. ಹಲವಾರು ವರ್ಷಗಳ ತಪಸ್ಸಿನ ನಂತರ,ಅವಳಿಗೆ ಗಂಡು ಮಗು ಜನಿಸಿತು.ಅವಳು ತಪಸ್ಸು ಮಾಡಿದ ಮತ್ತು ಹನುಮಂತ ಜನಿಸಿದ ಸ್ಥಳವು ಅಂಜನಾದ್ರಿ ಎಂದು ಪ್ರಸಿದ್ಧವಾಯಿತು.
ಹನುಮ ಜಯಂತಿಯ ಆಚರಣೆಗೆ ಎರಡು ಪ್ರಮುಖ ಸಂದರ್ಭಗಳಿವೆ. ಒಂದು ಚೈತ್ರ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ. ಮತ್ತೊಂದು ಸಂದರ್ಭವು ಹನುಮನು ರಾವಣನ ಆಸ್ಥಾನಕ್ಕೆ ಸೀತೆಯ ಅನ್ವೇಷಣೆಯಲ್ಲಿ ಹೋಗಿ, ಸೀತೆಯನ್ನು ಗುರುತಿಸಿ ಬಂದ ವಿಜಯೋತ್ಸವದ ನೆನಪಿಗೆ. ಈ ಎರಡೂ ಸಂದರ್ಭಗಳಲ್ಲಿ ಹನುಮ ಜಯಂತಿಯನ್ನು ಆಚರಿಸುವ ಪದ್ಧತಿ ನಮ್ಮ ಸಂಪ್ರದಾಯದಲ್ಲಿದೆ.
ವಿವಿಧ ಪ್ರದೇಶಗಳಲ್ಲಿ ಹನುಮ ಜಯಂತಿಯನ್ನು ಬೇರೆ ದಿನಾಂಕಗಳಲ್ಲಿ ಆಚರಿಸುತ್ತಾರೆ. ಹನುಮನ ಪೂಜೆ ಮತ್ತು ಪುನಸ್ಕಾರಗಳನ್ನು ನಿರ್ದಿಷ್ಟವಾಗಿ ಮಂಗಳವಾರ ಮತ್ತು ಶನಿವಾರದಂದು ಮಾಡಲಾಗುತ್ತದೆ. ಹನುಮನ ಸ್ಮರಣೆಯಿಂದ, ಪೂಜೆಯಿಂದ ಮತ್ತು ದರ್ಶನದಿಂದ ಜೀವನಕ್ಕೆ ಮಹತ್ವದ ಲಾಭಗಳು ದೊರೆಯುತ್ತವೆ. ಅವುಗಳೆಂದರೆ ಶಕ್ತಿ, ಭಕ್ತಿ ಮತ್ತು ಯುಕ್ತಿ. ಈ ಮೂರು ಅಂಶಗಳು ಜೀವನದಲ್ಲಿ ಇದ್ದರೆ, ಜೀವನವು ಸಾಫಲ್ಯತೆಯನ್ನು ಪಡೆಯುತ್ತದೆ ಎಂದು ಹೇಳಲಾಗುತ್ತದೆ.

