ಹುಚ್ಚು ನಾಯಿಗಳ ಆತಂಕ. ಬೀದಿ ದೀಪವಿಲ್ಲ. ಕತ್ತಲಲ್ಲಿ ನಾಲ್ಕನೇ ವಾರ್ಡ್. ಸಕಲೇಶಪುರ ಅಗ್ರಹಾರದ ಅವ್ಯವಸ್ಥೆ.
ಸಕಲೇಶಪುರ:ಪುರಸಭೆಯ ನಾಲ್ಕನೇ ವಾರ್ಡ್ನ ಅಗ್ರಹಾರದ ಪ್ರಥಮ ಕ್ರಾಸ್ನಲ್ಲಿ ವಿದ್ಯುತ್ ಕಂಬಗಳಿದ್ದರೂ, ಬೀದಿ ದೀಪಗಳು ಒಂದೆ ವಾರದಿಂದ ಕಾರ್ಯನಿರತವಾಗಿಲ್ಲ. ಶಿವಪಾರ್ವತಿ ದೇವಾಲಯದ ಸಮೀಪದ ಪ್ರದೇಶದಲ್ಲಿ ನಿರಂತರ ಕತ್ತಲೆ ಆವರಣವಿದ್ದು, ರಾತ್ರಿ ವೇಳೆ ಪೂಜಾರ್ಥಿಗಳು ಅಪಾರ ತೊಂದರೆ ಅನುಭವಿಸುತ್ತಿದ್ದಾರೆ.
ಕತ್ತಲಿನ ನಡುವೆ ಸ್ಥಳೀಯರು ಪೂಜೆ ಮಾಡಲು ಬರುವಾಗ ಹುಚ್ಚು ನಾಯಿಗಳ ಭಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇತ್ತೀಚೆಗಷ್ಟೆ, ಒಂದು ಹುಚ್ಚು ನಾಯಿ ಅಮಾಯಕ ವ್ಯಕ್ತಿಯೊಬ್ಬರ ಮೇಲೆ ದಾಳಿ ನಡೆಸಲು ಮುಂದಾಗಿದ್ದು, ಅವನು ಸಮಯ ಪ್ರಜ್ಞೆಯಿಂದ ತಪ್ಪಿಸಿಕೊಂಡಿದ್ದಾನೆ ಎಂಬ ಘಟನೆ ವರದಿಯಾಗಿದೆ.
ಸ್ಥಳೀಯರು ವಿದ್ಯುತ್ ಇಲಾಖೆ (ಕೆಇಬಿ) ಗೆ ದೂರವಾಣಿ ಮಾಡಿ ಬೀದಿ ದೀಪದ ಬಗ್ಗೆ ದೂರು ನೀಡಿದಾಗ, “ಈ ವಿಷಯ ಪುರಸಭೆಯದು” ಎಂದು ಬೆನ್ನು ತೋರಿಸಲಾಗಿದೆ. ಆದರೆ ಇದುವರೆಗೆ ಸಂಬಂಧಪಟ್ಟ ಇಲಾಖೆ ದೀಪಗಳನ್ನು ಸರಿಪಡಿಸಿಲ್ಲ. ಇಲ್ಲಿ ದೀಪ ಬಲ್ಬ್ ಬದಲಾಯಿಸಿದ ಉದಾಹರಣೆಗಳಿಲ್ಲ ಎಂಬುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ಅಗ್ರಹಾರವು ಜನನಿಬಿಡ ಪ್ರದೇಶವಾಗಿದ್ದರೂ ದೀಪದ ನಿರ್ವಹಣೆ ನಡೆದಿಲ್ಲ ಎಂಬುದು ಆಘಾತಕಾರಿಯಾಗಿದೆ. ಮಳೆಗಾಲದ ಗಾಳಿ, ಮಳೆಯ ನಡುವೆ ಗ್ರಾಮೀಣ ಭಾಗಗಳಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದೆಯಾದರೂ, ನಗರಮಧ್ಯದ ಈ ಪ್ರದೇಶಕ್ಕೆ ಕಡೆಗಣನೆ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿ ಬರುತ್ತಿದೆ.
ಆಗ್ರಹ: ಬೀದಿ ದೀಪದ ಸಮಸ್ಯೆ ಮತ್ತು ಹುಚ್ಚು ನಾಯಿಗಳ ಹಾವಳಿ ತೀವ್ರವಾಗಿದ್ದು, ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು,” ಎಂದು ಕರವೇ (ಪ್ರವೀಣ್ ಶೆಟ್ಟಿ ಬಣ) ಅಗ್ರಹಾರ ಘಟಕದ ಅಧ್ಯಕ್ಷರಾದ ಶ್ರೀ ಸುದೀಪ್ ಆಗ್ರಹಿಸಿದ್ದಾರೆ.



