ಸಕಲೇಶಪುರ ತಾಲೂಕಿನ ಕುಣಿಗನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಇದೇ ಪ್ರಥಮ ಬಾರಿಗೆ ವಿಭಿನ್ನವಾಗಿ ಶಾಲಾ ಭೇಟಿಗಳನ್ನ ಆಯೋಜಿಸಲಾಗಿತ್ತು. ಗ್ರಾಮ ಪಂಚಾಯತಿ ಅಧ್ಯಕ್ಷರಾದ ಕೆ ಎಸ್. ಪ್ರಕಾಶ್ ರವರ ನೇತೃತ್ವದಲ್ಲಿ,, ಆಯಾಯ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಸದಸ್ಯರು, ಪಿಡಿಓ, ಕಾರ್ಯದರ್ಶಿಗಳು ಹಾಗೂ ಸ್ಥಳೀಯ ಜನರ ಮೂಲಕ, ಪ್ರತಿಯೊಂದು ಶಾಲೆಗೂ ಸಹ ಮಧ್ಯಾಹ್ನದ ಅವಧಿಯಲ್ಲಿ ಭೇಟಿ ನೀಡಿ, ಶಾಲಾ ಮಕ್ಕಳೊಂದಿಗೆ ಸೇರಿ ಬಿಸಿ ಊಟ ಸಹಭೋಜನ ಮಾಡಿದರು.
ಇದೇ ಸಂದರ್ಭದಲ್ಲಿ ಮಕ್ಕಳ ಕಲಿಕಾ ಪರಿಶೀಲನೆ, ಶಾಲಾ ಸಮಸ್ಯೆಗಳನ್ನ ಪಟ್ಟಿ ಮಾಡಿಕೊಂಡರು. ಶಾಲೆಗೆ ಬೇಕಾದ ಸವಲತ್ತುಗಳನ್ನು ಗ್ರಾಮ ಪಂಚಾಯತಿ ಮೂಲಕ ಹಾಗೂ ಸಕಲೇಶಪುರದ ಶಾಸಕರಾದ ಎಸ್ ಮಂಜುನಾಥ್ ರವರ ಗಮನಕ್ಕೆ ತಂದು, ಹಂತ ಹಂತವಾಗಿ ಪ್ರತಿ ಶಾಲೆಯ ಸಮಸ್ಯೆಗಳನ್ನು ಬಗೆಹರಿಸುವುದು, ಜೊತೆಗೆ ಶಾಲೆಗಳಿಗೆ ಬೇಕಾದ ಎಲ್ಲ ಸವಲತ್ತುಗಳನ್ನು ನೀಡುವುದಾಗಿ ಭರವಸೆ ನೀಡಿದರು.
ಪ್ರತಿ ಶಾಲೆಯಲ್ಲಿನ ಸ್ವಚ್ಛತೆ, ಮಕ್ಕಳ ಕಲಿಕೆ ಇವುಗಳ ಬಗ್ಗೆ ವಿಶೇಷವಾಗಿ ಗಮನ ಹರಿಸಿದರು. ಪಂಚಾಯತಿ ವ್ಯಾಪ್ತಿಯಲ್ಲಿ ಯಾವುದೇ ಸರ್ಕಾರಿ ಶಾಲೆಗಳು ಮುಚ್ಚಬಾರದು ಎಂಬ ಉದ್ದೇಶದೊಂದಿಗೆ ಇದೇ ಪ್ರಥಮ ಬಾರಿ ಈ ರೀತಿಯ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಶಾಲಾ ಭೇಟಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಎಲ್ಲಾ ಶಾಲೆಗಳ ಎಸ್ ಡಿ ಎಂ ಸಿ ಅಧ್ಯಕ್ಷರು, ಸದಸ್ಯರು, ಶಿಕ್ಷಕರು ಹಾಗೂ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದರು.
ಸರ್ಕಾರಿ ಶಾಲೆ ಉಳಿಸುವ ನಿಟ್ಟಿನಲ್ಲಿ ಪ್ರತಿ ಶಾಲೆಗಳಿಗೆ ಭೇಟಿ ನೀಡಿ ಸಮಸ್ಯೆ ಆಲಿಸುವ ಪ್ರಥಮ ಪ್ರಯತ್ನಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ .

