*ಸ್ಕೌಟ್ಸ್ & ಗೈಡ್ಸ್ ಮಕ್ಕಳ ಮೌಲ್ಯಗಳನ್ನು ವೃದ್ಧಿಸುತ್ತದೆ : ಕ್ಷೇತ್ರ ಶಿಕ್ಷಣಾಧಿಕಾರಿ ಎ. ಜೆ. ಕೃಷ್ಣೇಗೌಡ*
ಆಲೂರು : ಭಾರತ್ ಸ್ಕೌಟ್ಸ್ & ಗೈಡ್ಸ್ ಮಕ್ಕಳಲ್ಲಿ ಮಾನವೀಯ ಹಾಗೂ ಸಾಮಾಜಿಕ ಮೌಲ್ಯಗಳನ್ನು ವೃದ್ಧಿಸುವುದರ ಜೊತೆಗೆ ಆದರ್ಶ ವ್ಯಕ್ತಿತ್ವ ರೂಪುರೇಷೆಗೆ ಸಹಕಾರಿಯಾಗಿದೆ ಎಂದು ಆಲೂರು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಎ. ಜೆ. ಕೃಷ್ಣೇಗೌಡ ಅಭಿಪ್ರಾಯಪಟ್ಟರು.
ಅವರು ಭಾರತ್ ಸ್ಕೌಟ್ಸ್ & ಗೈಡ್ಸ್ ಸ್ಥಳೀಯ ಸಂಸ್ಥೆ ಆಲೂರು ವತಿಯಿಂದ ಪಟ್ಟಣದ ಕ್ಷೇತ್ರ ಸಮನ್ವಯಾಧಿಕಾರಿಗಳ ಕಛೇರಿಯಲ್ಲಿ ಹಮ್ಮಿಕೊಂಡಿದ್ದ “ವಾರ್ಷಿಕ ಕಾರ್ಯಕ್ರಮಗಳ ಯೋಜನೆ” ಕೈಪಿಡಿಯ ಬಿಡುಗಡೆ ಕಾರ್ಯಕ್ರಮದಲ್ಲಿ ಸಂಚಿಕೆ ಅನಾವರಣಗೊಳಿಸಿ ಮಾತನಾಡಿ ಭಾರತ್ ಸ್ಕೌಟ್ಸ್ & ಗೈಡ್ಸ್ ೨೦೨೫-೨೬ ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಘಟಕ ಹಂತ, ತಾಲ್ಲೂಕು ಹಂತ, ಜಿಲ್ಲಾ ಹಂತ ಮತ್ತು ರಾಜ್ಯ ಹಂತದಲ್ಲಿ ನಿರಂತರವಾಗಿ ನಡೆಯುವ ಕಾರ್ಯ ಚಟವಟಿಕೆಗಳ ಸಂಪೂರ್ಣ ಮಾಹಿತಿ ಖಣಜ ಇದಾಗಿದ್ದು ಸ್ಕೌಟ್ಸ್ ಗೈಡ್ಸ್ ಶಿಕ್ಷಕರಿಗೆ ಮಾರ್ಗದರ್ಶಿಯಾಗಿದೆ. ಸ್ಕೌಟ್ಸ್ ಗೈಡ್ಸ್ ಮಕ್ಕಳಲ್ಲಿ ಶಿಸ್ತು, ಶ್ರದ್ಧೆ, ಸೇವಾ ಮನೋಭಾವನೆಯನ್ನು ಬೆಳೆಸುತ್ತದೆ. ಇಲಾಖಾ ಅಧಿಕಾರಿಗಳು ಈ ಸಂಸ್ಥೆಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಪ್ರಭಾರಿ ಕ್ಷೇತ್ರ ಸಮನ್ವಯಾಧಿಕಾರಿ ವಿಜಯ ಕುಮಾರ್, ಜಿಲ್ಲಾ ಸಹಾಯಕ ಆಯುಕ್ತ ಎಂ. ಬಾಲಕೃಷ್ಣ, ತಾಲ್ಲೂಕು ಕಾರ್ಯದರ್ಶಿ ಕೊಟ್ರೇಶ್ ಎಸ್. ಉಪ್ಪಾರ್, ತಾಲ್ಲೂಕು ಖಜಾಂಚಿ ಬಿ. ಎಸ್. ಹಿಮ, ತಾಲ್ಲೂಕು ಸಹ ಕಾರ್ಯದರ್ಶಿ ಕೆ.ಎಲ್. ವೆಂಕಟರಂಗಯ್ಯ, ಶಿಕ್ಷಣ ಸಂಯೋಜಕರಾದ ರವಿಕಿರಣ್, ದಿವಾಕರ್, ತಿಮ್ಮಶೆಟ್ಟಿ, ಗೈರ್ಸ್ ಮೈಮೂನ, ಪ್ರಮಿಳಾ ಸೇರಿದಂತೆ ತಾಲ್ಲೂಕಿನ ಎಲ್ಲಾ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳು ಹಾಜರಿದ್ದರು.
